ಪಶುಸಂಗೋಪನೆ
ಜಿಲ್ಲೆಯು ಹೈನೋದ್ಯಮಕ್ಕೆ ಹೆಸರು ವಾಸಿಯಾಗಿದ್ದು ಸರಾಸರಿ ವಾರ್ಷಿಕ 2337.58 ಲಕ್ಷ ಲೀಟರ್ ಹಾಲು, ಮಾಂಸ 29.72 ಸಾವಿರ ಟನ್, ಮೊಟ್ಟೆ 178.31 ಲಕ್ಷ ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಡಿ, ಜಿಲ್ಲೆಯಲ್ಲಿ 869 ಹಾಲು ಉತ್ಪಾದಕರ ಸಹಕಾರ ಸಂಘಗಳು ಅಸ್ಥಿತ್ವದಲ್ಲಿದ್ದು ಕಾರ್ಯ ನಿರ್ವಹಿಸುತ್ತಿವೆ.
2012 ರ 19ನೇ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ ಒಟ್ಟು ಜಾನುವಾರುಗಳ ಸಂಖ್ಯೆ:- ಒಟ್ಟು ದೇಶೀ ತಳಿ ದನಗಳು -1.34 ಲಕ್ಷ, ಒಟ್ಟು ಮಿಶ್ರ ತಳಿ ದನಗಳು -1.25 ಲಕ್ಷ, ಎಮ್ಮೆ-0.30 ಲಕ್ಷ, ಕುರಿ -1.52 ಲಕ್ಷ, ಮೇಕೆ -1.20 ಲಕ್ಷ ಮತ್ತು ಹಿತ್ತಲ ಕೋಳಿ -2.32 ಲಕ್ಷ , ವಾಣಿಜ್ಯ ಮೊಟ್ಟೆ ಕೋಳಿ -1.21 ಲಕ್ಷ, ಮಾಂಸದ ಕೋಳಿ -9.31 ಲಕ್ಷ ಇರುತ್ತವೆ. ಜಿಲ್ಲೆಯಲ್ಲಿ ಒಟ್ಟು 2.47 ಲಕ್ಷ ಕುಟುಂಬಗಳಿದ್ದು ಅವುಗಳ ಪೈಕಿ, 1.76 ಲಕ್ಷ ಕುಟುಂಬಗಳು ಪಶುಪಾಲನೆಯಲ್ಲಿ ನಿರತವಾಗಿವೆ. (ದನ ಸಾಕಾಣಿಕೆದಾರರು 0.87 ಲಕ್ಷ, ಎಮ್ಮೆ ಸಾಕಾಣಿಕೆದಾರರು 0.16 ಲಕ್ಷ, ಕುರಿ/ಮೇಕೆ ಸಾಕಾಣಿಕೆದಾರರು 0.46 ಲಕ್ಷ, ಕೋಳಿ ಸಾಕಾಣಿಕೆದಾರರು 0.27 ಲಕ್ಷ). ಜಿಲ್ಲೆಯಲ್ಲಿ ಪಶುವೈದ್ಯ ಸಂಸ್ಥೆಗಳಾದ ಪಾಲಿಕ್ಲಿನಿಕ್ 1, ಪಶುಆಸ್ಪತ್ರೆ 17, ಪಶುಚಿಕಿತ್ಸಾಲಯ 63, ಸಂಚಾರಿ ಪಶುಚಿಕಿತ್ಸಾಲಯ 4, ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ 36, ಕೋಳಿ ಸಾಕಾಣಿಕಾ ಕೇಂದ್ರ 1, ಒಟ್ಟು 122 ವಿವಿಧ ಪಶುವೈದ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಪಶುಸಂಗೋಪನಾ ಇಲಾಖೆಯು ಅಭಿವೃದ್ದಿ ಇಲಾಖೆಗಳಲ್ಲೊಂದಾಗಿದ್ದು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು, ತಾಲ್ಲೂಕು/ಹೋಬಳಿ ಮಟ್ಟದಲ್ಲಿ ಸಹಾಯಕ ನಿರ್ದೇಶಕರು, ಪಶುವೈದ್ಯಾಧಿಕಾರಿ ಹಾಗೂ ಗ್ರಾಮಾಂತರ ಪಶುವೈದ್ಯ ಸಂಸ್ಥೆಗಳಲ್ಲಿ ಪಶುವೈದ್ಯಕೀಯ ಪರೀಕ್ಷಕರು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ/ತಾಲ್ಲೂಕು ಮಟ್ಟದ ಕಾರ್ಯಾಲಯಗಳಲ್ಲಿ ತಾಂತ್ರಿಕ / ಅರೆ ತಾಂತ್ರಿಕ / ಲಿಪಿಕ ವರ್ಗದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.
ಜಾನುವಾರು ಆರೋಗ್ಯ ಸಂರಕ್ಷಣೆ ಇಲಾಖೆಯ ಆದ್ಯ ಕರ್ತವ್ಯವಾಗಿದ್ದು, ಕಾಲ ಕಾಲಕ್ಕೆ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳ ವಿರುದ್ದ ಸಾಮೂಹಿಕ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡು ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ದಿನನಿತ್ಯ ಪಶುವೈದ್ಯ ಸಂಸ್ಥೆಗಳಲ್ಲಿ ಜಾನುವಾರುಗಳ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ರೈತ ಸಂದರ್ಶನ ಸಭೆಗಳನ್ನು ಕಾಲಕಾಲಕ್ಕೆ ಏರ್ಪಡಿಸಿ ಜಾನುವಾರು ಸಾಕಾಣಿಕೆ ಮತ್ತು ಉತ್ಪತ್ತಿ ಹಾಗೂ ಉತ್ಪನ್ನಗಳ ಹೆಚ್ಚಳಕ್ಕೆ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ.
ಜಾನುವಾರುಗಳಲ್ಲಿ ಕಾಯಿಲೆ ಮರುಕಳಿಸದಂತೆ ತಡೆಯಲು ಇಲಾಖೆ ಮುಂಜಾಗ್ರತಾ ಕ್ರಮವಾಗಿ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು ಕಡ್ಡಾಯವಾಗಿ ವರ್ಷಕ್ಕೆ ಎರಡು ಬಾರಿ (6 ತಿಂಗಳಿಗೊಮ್ಮೆ) ಹಮ್ಮಿಕೊಂಡು ರೋಗ ತಡೆಗಟ್ಟುವಲ್ಲಿ ಕಾರ್ಯತತ್ಪರವಾಗಿವೆ.
ಇಲಾಖಾವತಿಯಿಂದ ಇನ್ನಿತರೆ ಸಾಂಕ್ರಾಮಿಕ ರೋಗಗಳಾದ, ಗಳಲೆ ರೋಗ, ಚಪ್ಪೆ ರೋಗ ಹಾಗೂ ಕಂದು ರೋಗಕ್ಕೂ ಸಹ ಲಸಿಕೆಯನ್ನು ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಹಾಕಲಾಗುತ್ತಿದೆ. ಕುರಿ ಮತ್ತು ಮೇಕೆಗಳಲ್ಲಿ ಕ್ರಮವಾಗಿ ಕರುಳು ಬೇನೆ ಹಾಗೂ ಪಿ.ಪಿ.ಆರ್. ರೋಗ ಬಾರದಂತೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡು ರೋಗಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ಕೋಳಿಗಳಿಗೆ ಕೊಕ್ಕರೆ ರೋಗದ ವಿರುದ್ದ ಲಸಿಕೆ ಎಲ್ಲಾ ಪಶುವೈದ್ಯ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ.
ಪಶುವೈದ್ಯ ಸಂಸ್ಥೆಗಳಲ್ಲಿ ಪ್ರೋವನ್ ಬ್ರೀಡ್ ತಳಿಗಳಾದ ಹೆಚ್.ಎಫ್, ಜರ್ಸಿ, ಅಮೃತ್ ಮಹಲ್, ಸುರ್ತಿ, ಮುರಾ, ಘನೀಕೃತ ವೀರ್ಯ ನಳಿಕೆಗಳು ಲಭ್ಯವಿದ್ದು, ಪ್ರತಿ ವೀರ್ಯ ನಳಿಕೆಗೆ ರೂ.15/- ರಂತೆ ಸೇವಾ ಶುಲ್ಕವನ್ನು ರೈತರಿಂದ ಸಂಗ್ರಹಿಸಿ ಹಣವನ್ನು ಸರ್ಕಾರಕ್ಕೆ ಜಮಾ ಮಾಡಲಾಗುತ್ತಿದೆ. ರಾಸುಗಳಲ್ಲಿ ಕೃತಕ ಗರ್ಭಧಾರಣಾ ಮಾಡುವ ಕಾರ್ಯಕ್ರಮ ಪ್ರಚಲಿತದಲ್ಲಿದ್ದು, ಹೆಚ್ಚು ಹಾಲನ್ನು ನೀಡುವ ರಾಸುಗಳನ್ನು ಪಡೆಯಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಿಸಿದ್ದು, ಹೈನುಗಾರಿಕೆ ಮೇಲೆ ಸಂಪೂರ್ಣ ಅವಲಂಬಿತರಾಗಿರುತ್ತಾರೆ.
ಪಶುವೈದ್ಯ ಸಂಸ್ಥೆಗಳಿಂದ ಬಹು ದೂರವಿರುವ ಗ್ರಾ,ಮಗಳಿಗೆ ಪಶುವೈದ್ಯ ಚಿಕಿತ್ಸಾ ಸೌಲಭ್ಯ ನಾಲ್ಕು ತಾಲ್ಲೂಕುಗಳ ಪಶುವೈದ್ಯ ಸಂಚಾರಿ ಘಟಕಗಳಿಂದ ಒದಗಿಸಲಾಗುತ್ತಿದೆ.
ಜಾನುವಾರುಗಳಲ್ಲಿ ಬರಡುತನವನ್ನು ಹೋಗಲಾಡಿಸಲು ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಂಡು ತಜ್ಞ ವೈದ್ಯರಿಂದ ಅಂತಹ ಜಾನುವಾರುಗಳನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ಹಾಗೂ ಸಲಹೆಗಳನ್ನು ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಮೇವಿನ ಕೊರತೆಯನ್ನು ನೀಗಿಸಲು ನೀರಾವರಿ ಸೌಲಭ್ಯವಿರುವ ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಬರ ಪರಿಹಾರ ನಿಧಿಯಡಿ ಸೋರ್ಗಂ ಮಲ್ಟಿಕಟ್, ಆಫ್ರಿಕನ್ ಟಾಲ್ ಮ್ಯೇಜ್ (ಎ.ಟಿ.ಎಂ) ಹಾಗೂ ಇನ್ನಿತರ 14260 ಮೇವಿನ ಕಿರುಪೊಟ್ಟಣಗಳನ್ನು ಪ್ರಸಕ್ತ ವರ್ಷ ಹಸಿರು ಮೇವು ಉತ್ಪಾದನೆಗಾಗಿ ರೈತರಿಗೆ ಉಚಿತವಾಗಿ ನೀಡಲಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ ಪೌಷ್ಟಿಕ ಆಹಾರದ ಕೊರತೆ ನೀಗಿಸಲು ಹಾಗೂ ಆರ್ಥಿಕ ಸಬಲೀಕರಣಕ್ಕೆ 7 ವಾರದ ಗಿರಿರಾಜ ಕೋಳಿಗಳನ್ನು ರಿಯಾಯಿತಿ ದರ ರೂ.80/- ರಂತೆ ಸಾಮಾನ್ಯ ವರ್ಗದವರಿಗೆ (ಮಹಿಳಾ/ಅಲ್ಪಸಂಖ್ಯಾಂತರು/ಅಂಗವಿಕಲರು/ಇತರೆ) ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗದವರಿಗೆ ಉಚಿತವಾಗಿ ಒಟ್ಟು 10580 ಗಿರಿರಾಜ ಕೋಳಿಮರಿಗಳನ್ನು ಪ್ರಸ್ತುತ ವಿತರಿಸಲಾಗಿದೆ.
ಹಾಲು ಉತ್ಪಾದಕರಿಗೆ ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರ ಪ್ರತಿ ಲೀಟರ್ ಗೆ ರೂ.5/- ರಂತೆ ಪ್ರೋತ್ಸಾಹಧನ ಒಟ್ಟು ರೂ.116.00 ಕೋಟಿಯನ್ನು ಪ್ರಸ್ತುತ 2017-18 ನೇ ಸಾಲಿನಲ್ಲಿ ಹಾಲು ಉತ್ಪಾದಕರ ಖಾತೆಗೆ ಜಮಾ ಮಾಡಲಾಗಿದೆ.
ರಾಜ್ಯ ವಲಯ ಯೋಜನೆಯಡಿ ವಿಶೇಷ ಘಟಕ ಯೋಜನೆಗೆ ಆಯ್ಕೆಯಾದ 116 ಫಲಾನುಭವಿಗಳಿಗೆ ಸಹಾಯಧನ ರೂ.69.60 ಲಕ್ಷ, ಹಾಗೂ ಗಿರಿಜನ ಉಪಯೋಜನೆಗೆ ಆಯ್ಕೆಯಾದ 27 ಫಲಾನುಭವಿಗಳಿಗೆ ರೂ. 16.20 ಲಕ್ಷ ಸಹಾಯಧನದೊಂದಿಗೆ ಮಿಶ್ರತಳಿ ರಾಸುಗಳನ್ನು ಖರೀದಿಸಲು ಪ್ರಸ್ತುತ 2017-18 ರ ಅವಧಿಯಲ್ಲಿ ಸಾಲ ಸೌಲಭ್ಯ ನೀಡಿ ಶೇ. 100 ರಷ್ಟು ಸಾಧನೆ ಮಾಡಲಾಗಿದೆ.
ಪಶುಭಾಗ್ಯ ಯೋಜನೆ
ಹಾಗೂ ಪಶುಭಾಗ್ಯ ಯೋಜನೆಯಡಿ ಒಟ್ಟು 676 ಫಲಾನುಭವಿಗಳಿಗೆ ರೂ. 1,61,88,150 ಸಹಾಯಧನ ನೀಡಿ, ಬ್ಯಾಂಕುಗಳ ಮುಖಾಂತರ ಸಾಲದೊಂದಿಗೆ ಹೈನುಗಾರಿಕೆ/ಕುರಿ/ಆಡು/ಹಂದಿ/ಕೋಳಿ ಸಾಕಾಣಿಕಾ ಘಟಕಗಳನ್ನು ವಿತರಿಸಿ ಯೋಜನೆಯನ್ನು ಪ್ರಸ್ತುತ ವರ್ಷ ಅವಧಿಯಲ್ಲಿ ಶೇ. 100 ರಷ್ಟು ಅನುಷ್ಠಾನಗೊಳಿಸಲಾಗಿದೆ.
ಆಕಸ್ಮಿಕ ಮರಣ ಹೊಂದಿದ ಕುರಿ/ಮೇಕೆಗಳಿಗೆ ರೂ.5000/- ಪರಿಹಾರ ಧನವನ್ನು ರೈತರಿಗೆ ಕೊಡಲಾಗುತ್ತಿದೆ. 2014-15 ರಿಂದ 2018-19 ರವರೆಗೆ ಸದರಿ ಯೋಜನೆಯಡಿ ಜಿಲ್ಲಾದಂತ್ಯ ಮರಣ ಹೊಂದಿದ 3467 ಕುರಿ/ಮೇಕೆಗಳಿಗೆ ರೂ. 1,73,35,000/- ಪರಿಹಾರಧನವನ್ನು ಈವರೆಗೆ ರೈತರಿಗೆ ನೀಡಲಾಗಿದೆ
ವಿಮೆ ಮಾಡಿಸದ ದೇಶಿ/ಮಿಶ್ರತಳಿಹಸು/ಎಮ್ಮೆ ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಇಲಾಖಾವತಿಯಿಂದ ರೂ.10000/- ರೈತರಿಗೆ ಪರಿಹಾರ ಧನ ನೀಡಲಾಗುವುದು. ಪ್ರಸ್ತುತ ವರ್ಷದಲ್ಲಿ ಈವರೆವಿಗೂ ಸದರಿ ಯೋಜನೆಯಡಿ 180 ಪ್ರಸ್ತಾವನೆಗಳನ್ನು ಆಯುಕ್ತಾಲಯಕ್ಕೆ ಸಲ್ಲಿಸಲಾಗಿದೆ.
ಜಾನುವಾರು ವಿಮೆ
ಜಾನುವಾರು ವಿಮೆ ಯೋಜನೆಯಡಿ ಹಾಲು ಕೊಡುವ (ಎಮ್ಮೆ/ಆಕಳು/ಮಣಕ) ರಾಸುಗಳಿಗೆ ಗರಿಷ್ಟ ರೂ.50000/- ದವರೆಗೆ ವಿಮೆ ಮಾಡಿಸಲು ಅವಕಾಶವಿರುತ್ತದೆ. ಒಬ್ಬ ರೈತ ಗರಿಷ್ಠ 5 ಜಾನುವಾರುಗಳನ್ನು ವಿಮೆಗೆ ಒಳಪಡಿಸಲು ಅವಕಾಶವಿದೆ. 2017-18 ರ ಪ್ರಸ್ತುತ ವರ್ಷದಲ್ಲಿ 2280 (2213 ಬಿ.ಪಿ.ಎಲ್. ಕುಟುಂಬ, 67 ಎ.ಪಿ.ಎಲ್. ಕುಟುಂಬ) ಕುಟುಂಬಗಳಿಗೆ ಸೇರಿದ 2288 ರಾಸುಗಳಿಗೆ ಈವರೆವಿಗೂ ವಿಮೆ ಮಾಡಲಾಗಿದೆ.