ದೇವಾಲಯಗಳು
ಮಾಗಡಿ ರಂಗನಾಥಸ್ವಾಮಿ ದೇವಸ್ಥಾನ

ರಾಮನಗರದಿಂದ 36 ಕಿ.ಮೀ. ದೂರದಲ್ಲಿರುವ ಮಾಗಡಿ ಪಟ್ಟಣದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವು ಚೋಳರ ಕಾಲದ ಪ್ರಸಿದ್ಧ ದೇವಾಲಯವಾಗಿದ್ದು, ಶ್ರೀ ರಂಗನಾಥಸ್ವಾಮಿ ವಿಗ್ರಹದÀ ಮುಖ ಪಶ್ಚಿಮ ದಿಕ್ಕಿನಲ್ಲಿದ್ದು, ಉಳಿದ ಎಲ್ಲಾ ವಿಗ್ರಹಗಳ ಪ್ರತಿಮೆಗಳ ಮುಖ ಪೂರ್ವದಿಕ್ಕಿಗಿವೆ. ದೇವಾಲಯದ ಮುಂಭಾಗದಲ್ಲಿ ಪುರಾತನ ಕಾಲದ ಪುಷ್ಕರಣಿ ಇದೆ. ನಿತ್ಯ ದಾಸೋಹವಿರುವ ಈ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳು ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ

ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ: ಬೆಂಗಳೂರು-ಮೈಸೂರು ರಸ್ತೆಯಲ್ಲಿ ರಾಮನಗರದಿಂದ 10 ಕಿ.ಮೀ. ದೂರದಲ್ಲಿರುವ ಕೆಂಗಲ್ ಆಂಜುನೇಯ ದೇವಾಲಯ ಪ್ರಕೃತಿ ನಿರ್ಮಿತ ಕೆಂಪು ಶಿಲೆಯಲ್ಲಿರುತ್ತದೆ. ಪ್ರತಿ ಶನಿವಾರ ಧಾರ್ಮಿಕ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳವಾಗಿದ್ದು, ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಕೆಂಗಲ್ ಹನುಮಂತಯ್ಯನವರು ನಿರ್ಮಿಸಿದ ಈ ದೇವಾಲಯವು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದು ಹೆಚ್ಚಿನ ಸಂಖ್ಯೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಕಬ್ಬಾಳು ದೇವಾಲಯ

ರಾಮನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಬ್ಬಾಳು ಬೆಟ್ಟ (ಕಬ್ಬಾಳಮ್ಮ ದೇವಾಲಯ) ಕನಕಪುರದಿಂದ 10 ಕಿ.ಮೀ. ದೂರದಲ್ಲಿದೆ. 1300 ಮೀಟರ್ ಎತ್ತರದಲ್ಲಿರುವ ಈ ಬೆಟ್ಟವು ತುಂಬಾ ಕಡಿದಾಗಿದ್ದು, ಪುರಾತನ ಕೋಟೆ ಇರುತ್ತದೆ. ಹಿಂದೆ ಈ ಕೋಟೆಯಲ್ಲಿ ಅಪರಾಧಿಗಳನ್ನು ಬಂಧಿಸಿಡುತ್ತಿದ್ದರು. ಕಬ್ಬಾಳಮ್ಮ ದೇವಿಯ ಸುಂದರವಾದ ದೇವಾಲಯವಿದ್ದು, ತುಂಬಾ ಆಕರ್ಷಕವಾದ ಕಬ್ಬಾಳಮ್ಮ ವಿಗ್ರಹವಿದೆ. ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳು ಹಾಗೂ ವಸತಿ ವ್ಯವಸ್ಥೆಯನ್ನು ಒದಗಿಸಲಾಗಿದೆ. ಮಂಗಳವಾರ, ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ಧಾರ್ಮಿಕ ಪ್ರವಾಸಿಗರು ಭೇಟಿ ನೀಡುವ ಪ್ರವಾಸಿ ಸ್ಥಳವಾಗಿದೆ.